ಹಸಿದು ಕೂಲಿಗೆ ಹೋದ ಅವ್ವ
ಸೆರಗಿನಲಿ ತಿನಿಸುತಿಂಡಿಗಳ,
ಒಡಲ ಕೂಸಿಗೆ ಬಚ್ಚಿಟ್ಟು-ಕೊಂಡದ್ದನ್ನು ಮರೆಯುವುದುಂಟೆ?
ದುಡಿದು ಬಳಲಿ, ಸಪ್ಪೆ ಮೊಗವ
ಮಾಡುತಾ ,ನಿದ್ದೆಯ ಲೆಕ್ಕಿಸದೆ,
ಕೂಸನು ಮಡಿಲಲ್ಲಿ ಲಲ್ಲೆಗೈಯುವ
ಕರುಳ ಕರುಣೆಯ ಮಮತೆ ಮಾಸುವುದುಂಟೆ?
ಮನೆಹದ್ದಿನ ಕಣ್ತಪ್ಪಿಸಿ ಕೂಸವಿದ್ಯೆಗೆಂದು
ಸಂಬಾರಡಬ್ಬಿಯೊಳಗೆ ಕೂಡಿಟ್ಟ
ಪುಡಿಗಾಸಲಿ ಓದಿ ಬುದ್ಧಿಪಡೆವಾಗ,
ನಗುವ ಅಮ್ಮನನು ದಡ್ಡಿಯನ್ನಲುಂಟೆ?
ಕಾಲ್ತಪ್ಪಿಸುವ ನದಿಯಲಿ
ನೀರೆದೆಯತನಕವಿದ್ದರೂ ಹೆಗಲಲಿರಿಸಿ,
ಸಿಡಿಲಮಳೆಗಂಜದೆ ವಿದ್ಯಾಮಂದಿರದೊಳತನಕ
ಕುಳ್ಳಿರಿಸಿ ಬರುವವ್ವನ ,ಬೆದರಿಸಿ ಗದರಿಸುವುದುಂಟೆ ?
ಸಿಕ್ಕ ದೈವ ದೇವಸ್ಥಾನಗಳ
ಗಂಧಲೇಪಗಳ ಹಣೆಗೆ ತಿಕ್ಕಿ,
ತುತ್ತು ಅನ್ನಕೆ ರಾತ್ರಿ ಹಗಲೆನದ,
ಮಮತೆ ಮೂರ್ತಿಗೆ ಮೂಢಳೆನುವುದುಂಟೇ?
ಬೇಗೆಯೆನಿಸಿದರೆ ಹಾಳೆಯ
ಬೀಸಣಿಗೆಯಲ್ಲಿ ಗಾಳಿಯ ಹಾಕುತ,
ಚಳಿಯೆನಿಸಿದರೆ ಇದ್ದೊಂದ ಕಂಬಳಿಯ ಹೊದೆವ,
ಅವ್ವಳಂತಹ ಪ್ರತ್ಯಕ್ಷ ದೈವ ಬೇರುಂಟೇ?
No comments:
Post a Comment