13 October 2011

ಸ್ವಾತಂತ್ರವಿಲ್ಲ ನಿನ್ನ ಆಯ್ಕೆಗೆ



ಗೆಳತಿ ನಿನಗೆ ಏಕೆ ಹೀಗೆ ಇಲ್ಲದ ನೋವು ತಳಮಳ
ಬಯಸಿದ ಆಸೆಪಟ್ಟಿದ್ದೆಲ್ಲ ದೊರೆಯುವುದಿಲ್ಲ ಎಲ್ಲ ಅಯೋಮಯ


ಖುಷಿಯ ಕ್ಷಣಕಿಂತ ನೋವಿನ ನೆನಪೇ ಬಹಳ
ಸಾಗಬೇಕಾದ ದಾರಿಯ ಅರಿವಿಲ್ಲ ಒಳಗಡೆ ನೋವಿದೆ
ಯಾರಿಗೂ ಅರಿವಾಗದ ನೋವುಗಳ ಪಾತಾಳ !



ಏನೆಲ್ಲಾ ಕನಸುಗಳಿದ್ದವು ಗೆಳತಿ ನಿನ್ನೆದುರಲ್ಲಿ
ಬಾಲ್ಯದ ಸವಿ ನೆನಪುಗಳ ಮನೆ ಮಾಡಿತ್ತು ನಿನ್ನಲ್ಲಿ
ಏನೆಲ್ಲಾ ಸಾಧನೆ ಸಾಹಸ ಮಾಡಬೇಕಾಗಿತ್ತು ಎನಿಸಿತ್ತು ಮನದಲ್ಲಿ



ಬೆಳೆದ ಮೇಲೆ ಏನಾಯ್ತು ಗೆಳತಿ ! ಕನಸುಗಳು ಕೊಚ್ಚಿ ಹೋದವು ಬೇರೆಯವರ ಸುಖದಲ್ಲಿ
ನಿನ್ನೆಲ್ಲ ಇಷ್ಟ ಕಷ್ಟಗಳ ಕೇಳುವರಿಲ್ಲ ಈ ಹಾಳು ಜಗದಲ್ಲಿ
ಹೊಂದಿಕೊಂಡೇ ಬಾಳಬೇಕು ಸುತ್ತ ಮುತ್ತಿನ ಜನರ ನಡುವಿನಲ್ಲಿ !


ನಿನಗಿಷ್ಟವೋ ಕಷ್ಟವೋ ಕೇಳುವರಿಲ್ಲ ನಿನ್ನಯ ಮಾತಾ ಯಾರು ಇಲ್ಲಿ
ಎಲ್ಲರಿಗೋ ಅವರದೇ ಸ್ವಾರ್ಥ ಅವರದೇ ಪ್ರಪಂಚ !
ನಿನ್ನಯ ದನಿಯ ಆಲಿಸುವ ಪುರುಸೊತ್ತು ಎಲ್ಲಿದೆ ಅವರಲ್ಲಿ


ನಿನ್ನ ಕನಸುಗಳ ನುಂಗಿಕೊಂಡೆ ಬೇರೆಯವರ ಕಣ್ಣಾಗಿ ಬಾಳಬೇಕು ನೀನಿಲ್ಲಿ
ಇಲ್ಲದೆ ಹೋದರೆ ಹುಚ್ಚು ಪ್ರಪಂಚ ಕೊಲ್ಲುವುದು ನಿನ್ನ ಚುಚ್ಚು ಮಾತಿನಲ್ಲಿ !
ಗೆಳತಿ ಇಂಥ ಜನರ ನಡುವೆ ನಿನ್ನ ಕನಸಿಗೆ ಬೆಲೆ ಸಿಗುವುದಾದರೂ ಎಲ್ಲಿ ?


ಬಾಲ್ಯದಲಿ ನೀ ಕಟ್ಟಿ ಕೊಂಡ ಸುಂದರ ಕನಸುಗಳು ಇಂದು ಏನಾದವು
ಅಪ್ಪ ಅಮ್ಮ ಅಣ್ಣ ತಂಗಿ ತಮ್ಮ ಇವರ ಸುಖ ನೆನೆದು ಅವು ಕರಗಿ ಹೋದವು
ಹಚ್ಚಿಕೊಂಡ ಮೆಚ್ಚಿಕೊಂಡ ಬದುಕು ಅಪ್ಪಿಕೊಂಡ ಪ್ರೀತಿ ಎಲ್ಲ ಮರೆತು ಹೋದೆವು
ಇನ್ನೊಬ್ಬರ ಖುಷಿಗೆ ನಿನ್ನ ಕನಸುಗಳು ಚೂರಾದವು


ಸ್ವಾತಂತ್ರವಿಲ್ಲ ಗೆಳತಿ ನಿನಗೆ ನಿನ್ನ ಆಯ್ಕೆಗೆ ! ಅವೆಲ್ಲ ಇದೆ ಅಕ್ಷರದ ರೂಪದಿ
ಕೊಚ್ಚಿ ಕೊಳ್ಳುವರು ಬಡಾಯಿ ! ಸ್ತ್ರಿ ಸಮಾನತೆಗೆ
ಹುಚ್ಚಿ ನಂಬಬೇಡ ಅದನ್ನ ! ಅದು ಹೂವಿಡುವ ಮಾತು ನಿನ್ನ ಕಿವಿಗೆ
ಕಟ್ಟಬಲ್ಲವರು ಯಾರು ಘಂಟೆಯ ಬೆಕ್ಕಿನ ಕೊರಳಿಗೆ ?

ನೆಪಕ್ಕಾದರೂ ಒಮ್ಮೆ ಅವನೆಲ್ಲ ನೆನೆದು ಮನದುಂಬಿ ನಕ್ಕು ಬಿಡು ಗೆಳತಿ
ಏಕೆಂದರೆ ಬದುಕು ಇರುವುದೇ ಈ ರೀತಿ !